ಮತಬೋಧೆ -
	ಕ್ರೈಸ್ತಮತಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದ (ಪ್ರೀಚಿಂಗ್). ಇದನ್ನು ಪ್ರಸಂಗ ಎಂದೂ ಕರೆಯುವುದಿದೆ. ಈ ಪದದ ಮೂಲ ಗ್ರೀಕ್. ಇದಕ್ಕೆ ಸಾರುವುದು ಎಂದು ಅರ್ಥ. ಕ್ರೈಸ್ತ ಮತಬೋಧೆ ಅಂದರೆ ಯೇಸುಕ್ರಿಸ್ತನಲ್ಲಿ ನಡೆದ ಮಹಾಘಟನೆಯನ್ನು ಸಾರುವುದು. ಯೇಸುವಿನ ಶಿಷ್ಯರು ಈ ವಾರ್ತೆಯನ್ನು ಮೊದಲು ಸಾರಿದರು. ಪ್ರೇತನು ಮಾಡಿದ ಪ್ರಥಮ ಪ್ರಸಂಗದಲ್ಲಿ ನಾಲ್ಕು ಪ್ರಮುಖ ವಿಜಯಗಳನ್ನು ಕಾಣುತ್ತೇವೆ; ಹಳೆ ಒಡಂಬಡಿಕೆಯ ಮೆಸ್ಸೀಯನ ಕುರಿತಾದ ಪ್ರವಾದನೆಗಳು ಯೇಸುಕ್ರಿಸ್ತನಲ್ಲಿ ನೆರವೇರಿವೆ. ಆತನ ಜೀವನ, ಮರಣ, ಪುನರುತ್ಥಾನಗಳ ಮೂಲಕ ಇವು ಪ್ರಕಟವಾಗಿವೆ. ಇವುಗಳ ಮುಖಾಂತರ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿದ. ಆದ್ದರಿಂದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟು ಯೇಸುವಿನ ಕಡೆಗೆ ತಿರುಗಿಕೊಳ್ಳಬೇಕು. 

	ಪ್ರಸಂಗ ಕ್ರೈಸ್ತ ಆರಾಧನೆಯ ಪ್ರಮುಖ ಅಂಗ. ದೇವರು ಮಾನವರ ರಕ್ಷಣೆಗಾಗಿ ಯೇಸುಕ್ರಿಸ್ತನಲ್ಲಿ ನೆರವೇರಿಸಿದ ಮಹಾಘಟನೆಗೆ ಸಾಕ್ಷಿಕೊಡುವ ಕಾರ್ಯ ಇಂದಿನತನಕವೂ ಅನಿರ್ಬಾಧಿತವಾಗಿ ಸಾಗಿದೆ. ಪ್ರಸಂಗದಲ್ಲಿ ಹೆಚ್ಚಾಗಿ ಎರಡುಭಾಗಗಳು ಕ್ರಿಸ್ತನಲ್ಲಿ ನಡೆದ ಮಹಾ ಘಟನೆಯನ್ನು ವಿವರಿಸುವಂತಿದ್ದು ಅವನ್ನು ಇಂದಿನ ಪರಿಸ್ಥಿತಿಗೂ ಅನ್ವಯಿಸುವುದು ಸಾಧ್ಯ.

	ಪ್ರಸಂಗದ ಚರಿತ್ರೆಯಲ್ಲಿ ಆರು ಮುಖ್ಯ ಘಟ್ಟಗಳನ್ನು ಗುರುತಿಸಬಹುದು; 1. ಹೊಸ ಒಡಂಬಡಿಕೆಯ ಕಾಲ (ಕ್ರಿ.ಶ.1ನೆಯಶತಮಾನ), ಅನ್ಯರು ಯೇಸುಕ್ರಿಸ್ತನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೋಸ್ತಲರು ಮಾಡಿದ ಪ್ರಸಂಗಗಳು. ಎರಡು ಕ್ರಿಸ್ತಶಕದ ಆದಿಯ ಶತಮಾನಗಳು. 2. ಈ ಕಾಲದಲ್ಲಿ ತಲೆ ಎತ್ತಿದ ಅನೇಕ ಸುಳ್ಳು ಬೋಧನೆಗಳಿಗೆ ವಿರುದ್ಧವಾಗಿ ಪ್ರಸಂಗಿಗಳು ಹೋರಾಡಿದುದು. 3. ಅಂಧಕಾರದಯುಗ, 10ನೆಯ ಶತಮಾನದಿಂದ 15ನೆಯ ಶತಮಾನದ ತನಕ. ಈ ಕಾಲದ ಪ್ರಸಂಗಿಗಳು ವಿಶೇಷ ಸ್ಫೂರ್ತಿದಾಯಕರಾಗಿರದೆ ಸಾಧಾರಣರಾಗಿದ್ದರು. 4. ಸಭಾ ಪುನಸ್ಥಾಪನೆಯ ಕಾಲ (16ನೆಯ ಶತಮಾನದ ಅನಂತರ). ಲೂಥರ್, ಕಾಲ್ವಿನ್, ಜಿಂಗ್ಲಿ ಎಂಬುವರು ಜನರ ಜೀವನ ದೇವರ ವಾಕ್ಯಕ್ಕೆ ಅನುಗುಣವಾಗಿ ಇರಬೇಕೇ ಹೊರತು ಸಂಪ್ರದಾಯಗಳ ದಾಸ್ಯತ್ವದಲ್ಲಿರಬಾರದು ಎಂಬುದಾಗಿ ಪ್ರಬಲವಾಗಿ ಪ್ರಸಂಗಿಸಿದರು. 5. ಇಂಗ್ಲೆಂಡಿನಲ್ಲಿ ಔದ್ಯೋಗಿಕ ಕ್ರಾಂತಿಯಾಗುವ ವೇಳೆಯಲ್ಲಿ ಜಾನ್‍ವೆಸ್ಲಿ, ಚಾಲ್ರ್ಸ್‍ವೆಸ್ಲಿ ಮತ್ತು ಹ್ವೈಟ್‍ಫೀಲ್ಡ್ ಎಂಬ ಬೋಧಕರು ಹೊಸರೀತಿಯ ಪ್ರಸಂಗಗಳನ್ನು ಮಾಡಿದರು. ಇವಕ್ಕೆ ಸಂಜೀವನ ಪ್ರಸಂಗಗಳು ಎಂದು ಹೆಸರು. 6. ಆಧುನಿಕ ಕಾಲ. ಈಗ ಬಾಯಿಂದ ಮಾತ್ರವಲ್ಲದೆ ರೇಡಿಯೋ, ಟಿವಿ, ಪತ್ರಿಕೆ ಮೊದಲಾದುವುಗಳ ಮೂಲಕ ಈ ಮಹಾ ಘಟನೆಗೆ ಸಾಕ್ಷಿ ಕೊಡುತ್ತಾರೆ. ಹೆಚ್ಚು ಕಡಿಮೆ 2000 ವರ್ಷಗಳ ಹಿಂದೆ ನಡೆದ ಈ ಮಹಾ ಘಟನೆ 20ನೆಯ ಶತಮಾನದ ಮಹಾಸಮಸ್ಯೆಗಳಿಗೆ ಹೀಗೆ ಪರಿಹಾರಕವಾಗಿದೆ ಎಂಬುದನ್ನು ಖಚಿತ ಪಡಿಸಲು ಪ್ರಸಂಗಿಗಳು ಅಹರ್ನಿಶಿ ದುಡಿಯುತ್ತಿದ್ದಾರೆ. ಪ್ರಸಂಗ ಕ್ರೈಸ್ತ ಜೀವನದ ಜೀವಾಳವಾಗಿದೆ.		 
(ಎಂ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ